ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 
ಸೆಪ್ಟೆಂಬರ್ 5 ಡಾ.ಎಸ್. ರಾಧಾಕೃಷ್ಣನ್ ಅವರ ಜನ್ಮದಿನವಲ್ಲ. ಡಾ. ರಾಧಾಕೃಷ್ಣನ್ ಅವರು ಸೆಪ್ಟೆಂಬರ್ 5ರಂದು ಮೈಸೂರಿನ ಯುವರಾಜಾ ಕಾಲೇಜಿನಲ್ಲಿ ಪ್ರಾಧ್ಯಾಪಕ ವೃತ್ತಿಗೆ ಸೇರಿಕೊಂಡ ದಿನ. ಅವರ ಜನ್ಮ ತಾರೀಖು 20-9-1887. ಹೀಗೆಂದು ಅವರ ಮಗ ಡಾ.ಸರ್ವಪಲ್ಲಿ ಗೋಪಾಲ ಅವರೇ ಹೇಳಿಕೊಂಡಿದ್ದಾರೆ. ಯುನೆಸ್ಕೊ ಅಕ್ಟೋಬರ್ 5ನ್ನು ಶಿಕ್ಷಕ ದಿನಾಚರಣೆ ಎಂದು ಘೋಷಿಸಿದೆ. ಸೆಪ್ಟೆಂಬರ್ 5 ರಂದು ಶಿಕ್ಷಕ ದಿನಾಚರಣೆ ಎಂದು ಆಚರಿಸಬಹುದೇ ಹೊರತು ಡಾ.ರಾಧಾಕೃಷ್ಣನ್ ಅವರ ಜನ್ಮದಿನಾಚರಣೆ ಎಂದಲ್ಲ. ಮೈಸೂರು ವಿಶ್ವವಿದ್ಯಾನಿಲಯದ ಅಧ್ಯಾಪಕರ ಸಂಘ ಅಕ್ಟೋಬರ್ 5 ರಂದು ವಿಶ್ವ ಶಿಕ್ಷಕರ ದಿನವನ್ನು ಆಚರಿಸುತ್ತದೆ.
ಶಿಕ್ಷಕ ಕುಲಕ್ಕೆ ಘನತೆ ಗೌರವಗಳನ್ನು ತಂದುಕೊಟ್ಟ ಒಬ್ಬ ಶ್ರೇಷ್ಠ ಶಿಕ್ಷಕ ಡಾ. ಎಸ್.ರಾಧಾಕೃಷ್ಣನ್ ಒಬ್ಬ ಶಿಕ್ಷಕ ಯಾವ ಎತ್ತರಕ್ಕೂ ಏರಬಲ್ಲ ಎಂಬುದನ್ನು ತೋರಿಸಿಕೊಟ್ಟವರು. 1949-1967 ರ ನಡುವಿನ ಕಾಲಘಟ್ಟದಲ್ಲಿ ಅವರು ರಾಯಭಾರಿಯಾಗಿ, ಉಪರಾಷ್ಟ್ರಪತಿಯಾಗಿ, ರಾಷ್ಟ್ರಪತಿಯಾಗಿ 18 ವರ್ಷಗಳ ಕಾಲ ದೇಶಸೇವೆ ಗೈದರು. ಇವರ ಹಾಗೆ ಮೊದಲು ಶಿಕ್ಷಕರಾಗಿದ್ದು ನಂತರ ರಾಷ್ಟ್ರಪತಿ ಹಾಗೂ ಪ್ರಧಾನಿ ಹುದ್ದೆ ಅಲಂಕರಿಸಿದವರಲ್ಲಿ ಡಾ. ಝಾಕೀರ್ ಹುಸೇನ್, ಡಾ. ಮನಮೋಹನಸಿಂಗ್, ಡಾ.ಎ.ಪಿ.ಜೆ.ಅಬ್ದುಲ್ ಕಲಾಮ್ ಅವರೂ ಶಿಕ್ಷಕ ಸಮುದಾಯದ ಹೆಮ್ಮೆ ಎನಿಸಿದವರು. ಇವರ ಜನ್ಮದಿನಾಚರಣೆಗಳು ಕೇವಲ ಸಾಂಪ್ರದಾಯಿಕ ಉತ್ಸವಗಳಾಗಬಾರದು. ಅಂದು ಕೇವಲ ಅವರ ಭಾವಚಿತ್ರಕ್ಕೆ ಹೂ ಹಾರ ಹಾಕಿ, ಮಿಠಾಯಿ ವಿತರಿಸುವ ಕಾರ್ಯಕ್ರಮಗಳಾಗಬಾರದು. ಬದಲಾಗಿ ಶಿಕ್ಷಕರ ಘನತೆಗೌರವಗಳನ್ನು ಹೆಚ್ಚಿಸುವ ವಿಧಾಯಕ ಕಾರ್ಯಕ್ರಮಗಳನ್ನು ಆಯೋಜಿಸಬೇಕು.
ಸಾಮಾನ್ಯವಾಗಿ ಇಂದಿನ ಶಿಕ್ಷಕರನ್ನು ಹಿಂದಿನ ತಲೆಮಾರಿನ ಶಿಕ್ಷಕರಿಗೆ ಹೋಲಿಸುವ ವಾಡಿಕೆ ಇದೆ, ಇದು ತಪ್ಪು. ಕಾಲ ಕಾಲಕ್ಕೆ, ಸ್ಥಳದಿಂದ ಸ್ಥಳಕ್ಕೆ ನೈತಿಕ ಮೌಲ್ಯಗಳು ಬದಲಾಗುತ್ತವೆ. ಆಚಾರ-ವಿಚಾರ, ವೇಷಭೂಷಣ, ಕಲಿಸುವ ಪದ್ಧತಿ ಪರೀಕ್ಷಾ ವಿಧಾನಗಳು ಬದಲಾಗುತ್ತಲೇ ಇರುತ್ತವೆ. ಕಾರಣ ಹೋಲಿಕೆ ಸಲ್ಲದು. ಸಮಾಜದ ಒಟ್ಟಾರೆ ರೀತಿ ನೀತಿ, ನೈತಿಕ ಮೌಲ್ಯಗಳು ಶಿಕ್ಷಕನ ಮೇಲೂ ಪ್ರಭಾವ ಬೀರುತ್ತವೆ. ಒಂದು ಕಾಲಕ್ಕೆ ಗುರುಶಿಷ್ಯನ ನಡುವೆ ಬಹಳೇ ಅಂತರವಿರುತ್ತಿತ್ತು. ಆದರೆ ಇಂದು ಗುರು-ಶಿಷ್ಯ ಸಂಬಂಧಗಳು ಸ್ನೇಹಿತರ ಸಂಬಂಧಗಳಾಗಿವೆ.
ಭಿಕ್ಷೆ ಬೇಡುವವನು ಭಿಕ್ಷಾರ್ಥಿ ಎನಿಸಿದಂತೆ, ವಿದ್ಯೆ ಬೇಡುವವನು ವಿದ್ಯಾರ್ಥಿ ಎನಿಸುತ್ತಾನೆ. ಗುರು ಎನಿಸುವವನು ಅಜ್ಞಾನವನ್ನು ಹೊಡೆದೋಡಿಸುವ ಬೆಳಕು. ಛಂದಸ್ಸಿನಲ್ಲಿ 'ಗುರು' ಎಂದರೆ ಘನವಾದದ್ದು. ತನ್ನ ಜ್ಞಾನದ ಬಲದಿಂದ ಗೌರವಾದರಗಳಿಗೆ ಪಾತ್ರನಾಗುವವನು. ಸದಾಕಾಲ ಅಧ್ಯಯನ ಮಾಡುವವನೇ ಗುರು ಎನಿಸುತ್ತಾನೆ. ಶಿಕ್ಷಕನನ್ನು ವಿವಿಧ ಪ್ರಕಾರಗಳ ಹೆಸರಿನಲ್ಲಿ ಗುರುತಿಸುತ್ತ ಬಂದಿದ್ದೇವೆ. ಟೀಚರ್ ಎನ್ನುವ ಪದದಲ್ಲಿ ಟೀಚ್ ಎನ್ನುವ ಅರ್ಥವಿದೆ. ಶಿಕ್ಷಕ ಎನ್ನುವ ಪದದಲ್ಲಿ ಕಲಿಸುವ ಮತ್ತು ದಂಡಿಸುವ ಅರ್ಥವಿದೆ. 'ಉಸ್ತಾದ' ಎನ್ನುವ ಪದದಲ್ಲಿ 'ಆಧಾರಸ್ತಂಭ' ಎನ್ನುವ ಅರ್ಥವಿದೆ. 'ಮಾಸ್ಟರ್ ಎನ್ನುವ ಪದದಲ್ಲಿ 'ಪ್ರಭುತ್ವ, 'ಯಜಮಾನಿಕೆ' ಎನ್ನುವ ಅರ್ಥಗಳಿವೆ. ಮೇಸ್ಟ್ರು ಹಾಗೂ ಮಾಸ್ತರ ಇವುಗಳು ಮಾಸ್ಟರ ಪದದ ಕನ್ನಡ ರೂಪಗಳು. ಸಾಮಾನ್ಯ ಶಿಕ್ಷಕನಾದವನು ಕೇವಲ ಓದುತ್ತಾನೆ, ಒಳ್ಳೆಯ ಶಿಕ್ಷಕ ವಿವರಿಸುತ್ತಾನೆ, ಉತ್ತಮ ಶಿಕ್ಷಕನು ಪ್ರಾತ್ಯಕ್ಷಿಕೆಗಳ ಮೂಲಕ ಕಲಿಸುತ್ತಾನೆ, ಅತ್ಯುತ್ತಮ ಶಿಕ್ಷಕನು ವಿದ್ಯಾಥರ್ಿಗಳಲ್ಲಿ ಸ್ಫೂತರ್ಿ, ಪ್ರೇರಣೆ ತುಂಬುತ್ತಾನೆ. ವಿದ್ಯಾಥರ್ಿಗಳಲ್ಲಿ ಅಧ್ಯಯನ ಮಾಡಬೇಕೆಂಬ ಹಂಬಲವನ್ನು ಉಂಟುಮಾಡುವವನೇ ನಿಜವಾದ ಶಿಕ್ಷಕ.
ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಮೈಸೂರು ವಿ.ವಿ.ಯಲ್ಲಿ ತತ್ವಶಾಸ್ತ್ರದ ಪ್ರಾಧ್ಯಾಪಕರಾಗಿದ್ದರು. ಅವರು ವಿದ್ಯಾಥರ್ಿಗಳಲ್ಲಿ ಅಪಾರವಾದ ಗೌರವಾದರಗಳಿಗೆ ಪಾತ್ರರಾದರು. ಮೈಸೂರಿನಿಂದ ಅವರನ್ನು ಬೀಳ್ಕೊಡುವಾಗ ಕುದುರೆಗಾಡಿಯೊಂದನ್ನು ಸಿಂಗರಿಸಿ, ಅದರಲ್ಲಿ ಡಾ. ರಾಧಾಕೃಷ್ಣನ್ ಅವರನ್ನು ಕೂಡ್ರಿಸಿ ಜಯಕಾರ ಹಾಕುತ್ತ ರೈಲುನಿಲ್ವಾಣಕ್ಕೆ ಕರೆ ತಂದರು. ಅದಕ್ಕೂ ಮೊದಲೇ ರೈಲು ನಿಲ್ದಾಣವನ್ನು ನೀರಿನಿಂದ ತೊಳೆದು ಸ್ವಚ್ಛಗೊಳಿಸಿದ್ದರು. ಅವರು ಕುಳಿತಿದ್ದ ಬೋಗಿಯನ್ನೂ ಅಲಂಕರಿಸಿದ್ದರು. ಅವರನ್ನು ಬೀಳ್ಕೊಡುವಾಗ ಅವರ ಕಣ್ಣಲ್ಲೂ ನೀರು, ವಿದ್ಯಾಥರ್ಿಗಳ ಕಣ್ಣಲ್ಲೂ ನೀರು !
ಒಂದು ಕಾಲಕ್ಕೆ ಡಾ. ರಾಧಾಕೃಷ್ಣನ್ ರಷ್ಯಾದ ರಾಯಭಾರಿಯಾಗಿದ್ದಾಗ ಅಂದಿನ ಪ್ರಧಾನಿ ಸ್ಟಾಲಿನ್ ಅವರನ್ನು ಭೇಟಿಯಾಗಿದ್ದರು. ಆಗ ಸ್ಟಾಲಿನ್ ಅವರು ರಾಧಾಕೃಷ್ಣನ್ ಅವರಿಗೆ "ನನ್ನನ್ನು ರಾಕ್ಷಸನಂತೆ ಕಾಣದೆ ಮನುಷ್ಯನಂತೆ ಕಂಡವರು ನೀವೊಬ್ಬರೇ" ಎಂದು ಹೇಳಿ ಕಣ್ಣೀರಿಟ್ಟರಂತೆ.
ಹೀಗೆ ಶಿಕ್ಷಕನಾದವನು ಮಾನವೀಯ ಮೌಲ್ಯಗಳನ್ನು ಕಳೆದುಕೊಳ್ಳದೆ ಅವುಗಳನ್ನು ಅಂತರ್ಗತ ಮಾಡಿಕೊಳ್ಳಬೇಕು. ಮಾನವೀಯತೆ ಇಲ್ಲದ ಶಿಕ್ಷಣ ಬೋಧನೆ ಶುಷ್ಕವೆನಿಸುತ್ತದೆ. ಶಿಕ್ಷಕನಾದವನು ಕೇವಲ ಕೊಡುವವನಾಗಬಾರದು, ತೆಗೆದುಕೊಳ್ಳಲೂ ಕಲಿಯಬೇಕು ಅಂದರೆ ಶಿಕ್ಷಕ ನಿರಂತರ ಕಲಿಯುತ್ತಲೇ ಇರಬೇಕು. ವಿದ್ಯಾರ್ಥಿಗಳಿಂದಲೂ ಕಲಿಯಲು ತಯಾರಿರಬೇಕು.
ಕಲಿಕೆ ತರಗತಿಯ ಒಳಗೆ ಮಾತ್ರ ನಡೆಯದೆ ಹೊರಗೆ ಕೂಡ ನಡೆಯುತ್ತದೆ. ಹಾದಿ ಬೀದಿಯ ಹುಲ್ಲಿನ ಗರಿ ತಂದು ಗೂಡು ಕಟ್ಟುವ ಹಕ್ಕಿ, ಹೂವಿಂದ ರಸ ತಿಂದು ತರುವ ಜೇನ್ನೊಣ, ತನ್ನ ಭಾರಕ್ಕೆ ಮೀರಿದ ಕಾಳನ್ನು ಹೊರುವ ಇರುವೆ, ತನ್ನ ಮರಿಗಳಿಗೆ ಉಣಿಸಿ ರಕ್ಷಣೆ ಮಾಡುವ ತಾಯಿಕೋಳಿ, ಒಂದಗುಳ ಕಂಡರೆ ತನ್ನ ಬಳಗವನ್ನು ಕೂಗಿ ಕರೆಯುವ ಕಾಗೆಯಿಂದ ಕೂಡ ನಾವು ಕಲಿಯುವದು ಬೇಕಾದಷ್ಟಿದೆ. ತರಗತಿಗಳಲ್ಲಿ ಕುಳಿತು ಕಲಿಯದೇ ಹೋದರೂ ರೈತಸಂಘದ ನಾಯಕ ನಂಜುಂಡಸ್ವಾಮಿಯವರು ಪ್ರೊಫೆಸರ್ ಎಂದೇ ಖ್ಯಾತಿ ಪಡೆದಿದ್ದರು. ಅವರು ರೈತರಿಗೆ ಚಳವಳಿಯ ಪಾಠ ಕಲಿಸಿದರು. ಕನರ್ಾಟಕದ ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯನವರನ್ನು ರಾಜಕೀಯಕ್ಕೆ ತಂದು ರಾಕಾರಣದ ಪಟ್ಟುಗಳನ್ನು ಹೇಳಿಕೊಟ್ಟರು. ಖ್ಯಾತ ಸಾಹಿತಿ ಲಂಕೇಶ ಅವರು ಇಂದಿಗೂ ಮೇಸ್ಟ್ರು ಎಂದೇ ಪ್ರಸಿದ್ಧರಾದವರು. ಖ್ಯಾತ ಕವಿ ರವೀಂದ್ರನಾಥ ಟ್ಯಾಗೋರರು ಯಾವುದೇ ವಿಶ್ವವಿದ್ಯಾಲಯದಲ್ಲಿ ಅಧಿಕೃತವಾಗಿ ಪ್ರಾಧ್ಯಾಪಕರಾಗಿರಲಿಲ್ಲ ಆದರೆ ಅವರು ಸಮಸ್ತ ಭಾರತಿಯರಿಗೆ 'ಗುರುದೇವ' ಎನಿಸಿದ್ದಾರೆ.
ಒಬ್ಬ ವ್ಯಕ್ತಿ ಎಷ್ಟೇ ದೊಡ್ಡವನಾದರೂ ಅವನನ್ನು ದೈವೀಕರಣಗೊಳಿಸುವದು ಸೂಕ್ತವಲ್ಲ. ಅವನನ್ನು ದೇವರನ್ನಾಗಿಸಿ, ಫೋಟೋ ಹಾಕಿ ಪೂಜೆ ಮಾಡಿದರೆ ಅದು ಸರಿಯಾದ ಆಚರಣೆ ಅಲ್ಲ. ಬದಲಾಗಿ ಅವರ ತತ್ವಗಳನ್ನು ಸ್ವಲ್ಪಮಟ್ಟಿಗಾದರೂ ಆಚರಣೆಯಲ್ಲಿ ತಂದರೆ ಅದೇ ನಿಜವಾದ ಆಚರಣೆ.
ಶಿಕ್ಷಕನು ಶಿಕ್ಷಕನ ಹಾಗೇ ಇರಬೇಕು, ರಾಜಕಾರಣಿಯಾಗಲು ಹೋಗಬಾರದು. ಒಮ್ಮೆ ಶಿಕ್ಷಕನಾದ ಮೇಲೆ ಆ ವೃತ್ತಿಯ ಘನತೆ ಗೌರವ ಕಾಪಾಡಬೇಕು. ಒಬ್ಬ ತಂದೆ ಕೆಟ್ಟರೆ ಒಂದು ಕುಟುಂಬ ಹಾಳಾಗುತ್ತದೆ, ಒಬ್ಬ ಇಂಜಿನಿಯರ್ ಕೆಟ್ಟರೆ ಒಂದು ಸೇತುವೆ ಹಾಳಾಗುತ್ತದೆ, ಒಬ್ಬ ಡಾಕ್ಟರ್ ಕೆಟ್ಟವನಿದ್ದರೆ ಒಂದು ಪೇಸೆಂಟ್ ಸಾಯುತ್ತದೆ.
ಆದರೆ ಒಬ್ಬ ಶಿಕ್ಷಕ ಶಿಕ್ಷಕನಾಗಿ ಉಳಿಯದೆ ಹೋದರೆ ಒಂದು ಜನಾಂಗವೇ ಹಾಳಾಗಿ ಹೋಗುತ್ತದೆ. ಶಿಕ್ಷಕರೇ ನಿಜವಾದ ರಾಷ್ಟ್ರರ್ಮಾಪಕರು, ರಾಜಕಾರಣಿಗಳಲ್ಲ. ಶಿಕ್ಷಕ ವೃತ್ತಿ ಕೀಳಾದ ವೃತ್ತಿಯೆಂದು ಬಗೆಯದೆ ಅದನ್ನು ಪ್ರಿತಿಸಬೇಕು. ಯಾವ ವೃತ್ತಿಯೂ ಮೇಲಲ್ಲ, ಕೀಳಲ್ಲ. ನಾವು ಆ ವೃತ್ತಿಯನ್ನು ಹೇಗೆ ನಿರ್ವಹಿಸುತ್ತೇವೆ ಎಂಬುದರ ಮೇಲೆ ಆ ವೃತ್ತಿಯ ಪರಿಗಣನೆ ಆಗುತ್ತದೆ.
ಒಂದು ಕಾಲಕ್ಕೆ ತಿಂಗಳಿಗೆ 10-15 ರೂ. ಸಂಬಳದ ಮೇಲೆ ಶಿಕ್ಷಕ ವೃತ್ತಿ ಕೈಕೊಂಡು ಅಪಾರ ಸೇವೆ ಮಾಡಿದವರಿದ್ದಾರೆ. ನನಗೆ 1968-69 ರಲ್ಲಿ ತಿಂಗಳಿಗೆ ಬರೀ 130 ರೂ. ಸಂಬಳವಿತ್ತು. ಇಂದಿನ ಪೀಳಿಗೆಯ ಶಿಕ್ಷಕರಿಗೆ ಹೊಟ್ಟೆ ತುಂಬಿ ಉಳಿಯುವಷ್ಟು ಸಂಬಳ ದೊರೆಯುತ್ತದೆ. ಹೀಗಿರುವಾಗ ಸಂಬಳಕ್ಕೆ ಸರಿಯಾಗಿ ನಮ್ಮ ಸೇವೆ ದೇಶಕ್ಕೆ ದೊರೆಯಬೇಕು. ಅಂದಾಗ ಮಾತ್ರ ರಾಷ್ಟ್ರ ಪ್ರಗತಿಯತ್ತ ಸಾಗುತ್ತದೆ. ಶಿಕ್ಷಕರಾದವರು ತಮ್ಮ ಶಾಲೆಯನ್ನು, ತಮ್ಮ ವೃತ್ತಿಯನ್ನು, ತಮ್ಮ ವಿದ್ಯಾರ್ಥಿಗಳನ್ನು ಪ್ರೀತಿಯಿಂದ ಗೌರವದಿಂದ ಕಂಡಾಗ ಮಾತ್ರ ಶಿಕ್ಷಣದ ಗುಣಮಟ್ಟ ಸುಧಾರಿಸಬಲ್ಲದು.